ನಮ್ಮ ಜೀವನವೆಂಬ ಕಾದಂಬರಿಯಲ್ಲಿ ನಾವು ನೋಡದ ಪುಟಗಳು ಸಾಕಷ್ಟಿರುತ್ತವೆ. ಅಂಥಾ ಒಂದಷ್ಟು ಪುಟಗಳನ್ನು ತೆರೆದಿಡುವ ಪ್ರಯತ್ನವೇ `ನೋಡದ ಪುಟಗಳು` ಬಾಲ್ಯದ ದಿನಗಳಲ್ಲಿ ಶಾಲಾ, ಕಾಲೇಜಿನಲ್ಲಿ ನಡೆಯುವ ತುಂಟಾಟ, ಜಗಳ, ಕೋಪ ತಾಪ ಇದನ್ನೆಲ್ಲ ಇಟ್ಟುಕೊಂಡು ಮಾಡಿರುವ ಕಥೆಯಲ್ಲಿ ಬರುವ ಟ್ವಿಸ್ಟ್ ಅಂಡ್ ಟರ್ನ್ ಗಳು ಇಲ್ಲಿ ವಿಶೇಷ.
ಶಾಲಾದಿನಗಳಲ್ಲಿ ಆದ ಫಸ್ಟ್ ಲವ್ , ಮುಂದೆ ಕೆಲಸಕ್ಕೆ ಸೇರಿ, ವರ್ಷಗಳ ನಂತರ ಭೇಟಿಯಾದಾಗ ಒಬ್ಬರಿಗೊಬ್ಬರು ಅರಿತುಕೊಳ್ಳುತ್ತಾರೆ. ಮತ್ತೆ ಗೆಳತನದಲ್ಲಿ ಸಾಗಿ ನಂತರ ಪ್ರೀತಿ ಬೆಸೆದಾಗ ಅಲ್ಲಿ ನಡೆಯಬಹುದಾದ ಅಂಶಗಳು ಏನು? ಇದರಿಂದ ಅವರಿಬ್ಬರ ಜೀವನದಲ್ಲಿ ಯಾವ ರೀತಿ ಗೊಂದಲಗಳು ಹುಟ್ಟಿಕೊಳ್ಳುತ್ತದೆ. ಅದರಿಂದ ಪರಿಹಾರ ಸಿಕ್ಕಿತೆ ? ಎನ್ನುವುದನ್ನು ಕುತೂಹಲಕರವಾಗಿ ನಿರ್ದೇಶಕ ಎಸ್.ವಸಂತ್ಕುಮಾರ್ ಈ ಚಿತ್ರದಲ್ಲಿ ಹೇಳಿದ್ಸಾರೆ.
ವೃತ್ತಿಯಲ್ಲಿ ಎಂಜಿನಿಯರ್ ಆದರೂ ಸಿನಿಮಾ ಮೇಲಿನ ಪ್ರೀತಿಯಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ತಮ್ಮ ಬದುಕಿನಲ್ಲಿ ನೋಡಿದಂತ ಒಂದಷ್ಟು ನೆನಪುಗಳನ್ನು ತೆರೆಯಮೇಲೆ ತಂದಿದ್ದಾರೆ. ಮೊದಲ ಪ್ರಯತ್ನದಲ್ಲೇ ಉತ್ತಮ ಕಥೆ ಇಟ್ಟುಕೊಂಡು ಎಲ್ಲ ವರ್ಗದವರೂ ಇಷ್ಟಪಡುವಂತಹ ಸಿನಿಮಾ ನೀಡಿದ್ದಾರೆ. ಎಲ್ಲರ ಬದುಕಿನಲ್ಲಿ ಕೆಟ್ಟ ಸಮಯ ಬಂದೇ ಬರುತ್ತೆ. ಅದು ನಮ್ಮನ್ನು ಹತೋಟಿಯಲ್ಲಿಡುತ್ತದೆ. ಇಲ್ಲದೆ ಹೋದಲ್ಲಿ ನಾವು ಹತೋಟಿಯಲ್ಲಿಟ್ಟುಕೊಳ್ಳಬೇಕು. ಜೀವನದಲ್ಲಿ ತಾಳ್ಮೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಸಂದರ್ಭ ಬರುವುದಿಲ್ಲ ಎಂಬುದನ್ನು ಸೂಕ್ಷವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಆದಿತ್ಯನಾಗಿ ಪ್ರೀತಂ ಮಕ್ಕಿಹಳ್ಳಿ ಅಭಿನಯದಲ್ಲಿ ಪಳಗಬೇಕಿದೆ. ಮೊದಲ ಚಿತ್ರವಾದ್ದರಿಂದ ಒಪ್ಪಬಹುದು. ಹರಿಣಿಯಾಗಿ ಕಾವ್ಯ ರಮೇಶ್ ತಮ್ಮ ಪಾತ್ರಕ್ಕೆ ಜೀವ ತುಂಬುವ ಮೂಲಕ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ವಾಸು, ವಿಲಾಸ್ ಕುಲಕರ್ಣಿ, ಗೌತಂ.ಜಿ, ಅಶೋಕ್ರಾವ್, ಪಿ.ಬಿ.ರಾಜುನಾಯಕ, ಶಾಂತಿ.ಎಸ್.ಗೌಡ, ಸೌಭಾಗ್ಯ, ಮೋಹನ್ಕುಮಾರ್, ರಘುಶ್ರೀವತ್ಸ, ಅಮೃತೇಶ್, ರೇಣುಕಗೌಡ ಕಥೆಯ ಓಟಕ್ಕೆ ಸಾಥ್ ನೀಡಿದ್ದಾರೆ. ವಿಘ್ನೇಶ್ ಮೆನನ್ ಸಂಗೀತದ ಎರಡು ಹಾಡುಗಳು ಕೇಳುವಂತಿವೆ. ಕುಮಾರ್ ಅವರ ಕ್ಯಾಮೆರಾ ಕೆಲಸಕ್ಕೆ ರಘುನಾಥ್ ಸಂಕಲನ ಪೂರಕವಾಗಿದೆ. ಹೊಸತನವನ್ನು ಇಷ್ಟಪಡುವವರಿಗೆ ಇದು ಪಕ್ಕಾ ಪೈಸಾ ವಸೂಲ್ ಚಿತ್ರ ಎನ್ನಬಹುದು.